ನಟ್ - 
ರಂಧ್ರದೊಳಗೆ ಒಳತಿರುಪು ಗಾಡಿಯಿರುವ, ಸಾಮಾನ್ಯವಾಗಿ ಚಚ್ಚೌಕ ಅಥವಾ ಷಟ್ಪಲಾಕೃತಿಯಲ್ಲಿರುವ ಲೋಹದ ಗಟ್ಟಿ. ಅಪರಿಷ್ಕøತ ಮತ್ತು ಪರಿಷ್ಕøತ ಎಂಬ ಮೂರು ಶ್ರೇಣಿಗಳಲ್ಲಿ ಇದು ದೊರೆಯುತ್ತದೆ. ಹೊರ ತಿರುಪು ಗಾಡಿಯನ್ನು ಕೊರೆದಿರುವ ಬೋಲ್ಟ್ ಅಥವಾ ಸ್ಟಡ್ಡಿನ ಕಾಂಡದ ತುದಿಯಿಂದ ಇದನ್ನು ತಿರುಗಿಸುವುದರಿಂದ ಇದಕ್ಕೂ ಬೋಲ್ಟ್ ಶಿರಕ್ಕೂ ನಡುವಿನಲ್ಲಿ ಬೇಕಾದ ಭಾಗಗಳ ಜೋಡಣೆ ಸಾಧ್ಯ. ವಿಶಿಷ್ಟ ಉದ್ದೇಶಗಳಿಗಾಗಿ ನಟ್ಟಿನಲ್ಲೂ ಹಲವು ಬೇರೆ ಮಾದರಿಗಳಿರುವುದನ್ನು ಚಿತ್ರ (1)ರಲ್ಲಿ ತೋರಿಸಿದೆ. ಅವುಗಳ ವಿವರಗಳು:

	(ಎ) ಅಂಚುಳ್ಳ ನಟ್: ಆಧಾರ ಕ್ಷೇತ್ರವನ್ನು ವಿಸ್ತರಿಸಿರುವುದರಿಂದ ಭಾಗದಲ್ಲಿಯ ರಂಧ್ರ ದೊಡ್ಡದಾಗಿದ್ದರೂ ಇದನ್ನು ಉಪಯೋಗಿಸಬಹುದು.

	(ಬಿ) ಉಬ್ಬಿದ ಪೀಠವುಳ್ಳ ನಟ್: ಬೋಲ್ಟು ಲಂಬ ರೇಖೆಯಿಂದ ಓರೆಯಾದಾಗ ಅಥವಾ ಜೋಡಿಸುವ ಭಾಗ ಬೋಲ್ಟ್ ಅಕ್ಷಕ್ಕೆ ಮೇಲೆ ಮಟ್ಟಕ್ಕಿಲ್ಲದಾಗ ಇದು ಹೊಂದಿಕೆ ಆಗುತ್ತದೆ. ಕಾರುಗಳಿಗೆ ಚಕ್ರಗಳನ್ನು ಜೋಡಿಸುವಲ್ಲಿಯ ಉಪಯೋಗ ಇದಕ್ಕೆ ಒಂದು ಉದಾಹರಣೆ.

	(ಸಿ) ಮುಚ್ಚಳದ ಅಥವಾ ಟೊಪ್ಪಿಗೆಯ ನಟ್: ತಿರುಪುಗಾಡಿಯ ಮಾರ್ಗವಾಗಿ ದ್ರವ ಹೊರಕ್ಕೆ ಸ್ರವಿಸುವುದನ್ನು ತಡೆಯುತ್ತದೆ. ಹಾಗೆಯೇ ಬೋಲ್ಟಿನ ತುದಿಯನ್ನು ತೇವದಿಂದ ಮತ್ತು ಬೇರೆ ರೀತಿಯ ಅಪಾಯದಿಂದ ರಕ್ಷಿಸುತ್ತದೆ.

	(ಡಿ) ನಲ್ರ್ಡ್ ಅಥವಾ ಗುಬಟುಳ್ಳ ನಟ್: ನಟ್ಟುಗಳನ್ನು ಆಗಾಗ್ಗೆ ಬಿಗಿಪಡಿಸುವ ಮತ್ತು ಅಳ್ಳಕ ಮಾಡುವ ಅಗತ್ಯವಿರುವೆಡೆಗಳಲ್ಲಿ ಬರಿಗೈಯಿಂದಲೇ ಆದಷ್ಟು ಬಿಗಿ ಮಾಡಲು ಒರಟಾದ ಗುಬಟು ಸೌಲಭ್ಯ ಒದಗಿರುತ್ತದೆ.

	(ಇ) ರೆಕ್ಕೆಗಳುಳ್ಳ ನಟ್: ಇದೂ ಬರಿಯ ಕೈಬೆರಳ ಒತ್ತಡದಿಂದಲೇ ಬಿಗಿ ಮಾಡಲಾಗುವಂಥದು.

	(ಈ) ದುಂಡು ನಟ್: ಇದು ಸಿಲಿಂಡರಾಕೃತಿಯದು. ಇದರ ಸುತ್ತಿನಲ್ಲಿ ಮೂರು ರಂಧ್ರಗಳನ್ನು ಕೊರೆದಿರುತ್ತದೆ. ಮೊಳೆ ತಿರುಚುಳಿಯ ಸಹಾಯದಿಂದ ಇದನ್ನು ಬಿಗಿ ಅಥವಾ ಅಳ್ಳಕ ಮಾಡಬಹುದು.

	ಷಟ್ಫಲಕದ ನಟ್ಟುಗಳ ಮೇಲು ಮುಖದ ಮೂಲೆಯನ್ನು ಸುತ್ತಲೂ ತಳದಿಂದ 30 ಡಿಗ್ರಿ ಕೋನವಿರುವಂತೆ ತಟ್ಟಿರಲಾಗುತ್ತವೆ. ತಿರುಚುಳಿಯನ್ನು (ಸ್ಪ್ಯಾನರ್) ಸುಲಭವಾಗಿ ತೂರಿಸುವುದೂ ನಟ್ಟಿನ ಏಣು ಹರಿತವಾಗಿದ್ದು ಕೈಗೆ ಅಪಾಯ ಉಂಟು ಮಾಡುವುದನ್ನು ತಪ್ಪಿಸುವುದೂ ಇದರ ಉದ್ದೇಶ. ಕೆಲವೊಮ್ಮೆ ನಟ್ಟುಗಳ ಎರಡು ಮುಖಗಳನ್ನೂ ಹೀಗೆ ತಟ್ಟಿರಬಹುದು. ಚಚ್ಚೌಕದ ನಟ್ಟುಗಳಲ್ಲೂ ಹೀಗೆ ಮೂಲೆ ತಟ್ಟಿರುವುದುಂಟು. ಈ ಆಕೃತಿಗಳ ಬೋಲ್ಟ್ ಶಿರಗಳಲ್ಲೂ ಹೀಗೆ ಮಾಡಿರುತ್ತಾರೆ.

	ಸತತವಾದ ಅದಿರಿಕೆಗೆ ಒಳಗಾಗುವ ಯಂತ್ರ ಮತ್ತು ಬಂಡಿಗಳಲ್ಲಿ ನಟ್ಟುಗಳು ತಾವಾಗಿಯೇ ಅಳಕವಾಗುವ ಸಂಭವವುಂಟು. ಇದನ್ನು ನಿವಾರಿಸುವುದಕ್ಕಾಗಿ ಹಲವು ರೀತಿಯ ಸಾಧನಗಳನ್ನು ಶೋಧಿಸಲಾಗಿದೆ. ಕೆಲವು ವಾಸ್ತವಿಕ ತಡೆಗಳು, ಕೆಲವು ಘರ್ಷಣ ತಡೆಗಳು. ಚಿತ್ರದಲ್ಲಿ ಎರಡು ನಟ್ಟುಗಳ ಉಪಯೋಗದಿಂದ ಮಾಡುವ ಘರ್ಷಣ ರೀತಿಯ ತಡೆಯನ್ನು ತೋರಿಸಿದೆ. 

	ಸಾಮಾನ್ಯದ ಅರ್ಧ ದಪ್ಪದ ತೆಳ್ಳನೆಯ ತಡೆ ನಟ್ಟನ್ನು ಮೊದಲು ಪೂರ್ತಿ ತಿರುಗಿಸಿ, ಅದರ ಮೇಲೆ ದಪ್ಪವಾದ ಸಾಮಾನ್ಯಬಳಕೆಯ ನಟ್ಟನ್ನು ಭದ್ರವಾಗಿ ತಿರುಪಿಸಲಾಗುತ್ತದೆ. ಅನಂತರ ಮೇಲಿನ ನಟ್ಟನ್ನು ತಿರುಚುಳಿಯಿಂದ ಭದ್ರವಾಗಿ ಹಿಡಿದುಕೊಂಡು, ತೆಳ್ಳನೆಯ ಇನ್ನೊಂದು ತಿರುಚುಳಿಯಿಂದ ಕೆಳಗಿನ ನಟ್ಟನ್ನು ಅಳ್ಳಕಮಾಡಿ ಮೇಲಿನ ನಟ್ಟಿನ ತಳಕ್ಕೆ ಭದ್ರವಾಗಿ ಒತ್ತುವಂತೆ ಹಿಂದಕ್ಕೆ ತಿರುಗಿಸಲಾಗುವುದು. ಭಾರದ ಹೊರೆ ಮೇಲಿನ ನಟ್ಟಿನ ಮೇಲೆ ಇರುತ್ತದೆ. ಅಲ್ಲದೆ ನಟ್ಟುಗಳ ಒಳತಿರುಪು ಗಾಡಿಗಳು ಬೋಲ್ಟಿನ ಹೊರತಿರುಪುಗಾಡಿಗಳೊಡನೆ ಎರಡೂ ಕಡೆಯಿಂದ ಅಮುಕಿ ನಿಂತಿರುವುದರಿಂದ ಅಳ್ಳಕವಾಗಿರುವುದಿಲ್ಲ. ಇದರ ಮರ್ಮ ತಿಳಿಯದೆ ಸೌಲಭ್ಯದ ದೃಷ್ಟಿಯಿಂದ, ತೆಳ್ಳಗಿನ ನಟ್ಟನ್ನು ಒಮ್ಮೊಮ್ಮೆ ತಪ್ಪಾಗಿ ಮೇಲುಗಡೆ ಹಾಕಿಬಿಡುವುದುಂಟು. ಅದರಿಂದಾಗಿ ಎರಡೂ ನಟ್ಟುಗಳನ್ನು ಸಾಮಾನ್ಯ ದಪ್ಪದ ಮುಕ್ಕಾಲು ಇಟ್ಟು ಉಪಯೋಗಿಸುವ ಅಭ್ಯಾಸವೂ ಇದೆ. (ಬಿ)ಯಲ್ಲಿ ನಟ್ ಮತ್ತು ಬೋಲ್ಟಿನ ಮೂಲಕ ಹಾಯುವಂತೆ ರಂಧ್ರಮಾಡಿದ್ದು ಮೊಳೆಯನ್ನು ತೂರಿಸಿರುವುದನ್ನು ಕಾಣಬಹುದು. (ಸಿ) ಮತ್ತು (ಡಿ)ಯಲ್ಲಿ ನಟ್ಟಿನ ಮೇಲುಗಡೆ ಬೋಲ್ಟಿನ ಮೂಲಕ ಸೀಳು ಮೊಳೆ ಹಾಯುತ್ತದಲ್ಲದೆ ಹೊಂದಾಣಿಕೆ ಸಾಧ್ಯವಾಗುವಂತೆ ನಟ್ಟಿನ ಮೇಲು ಮುಖದಲ್ಲಿ 60 ಡಿಗ್ರಿ ಕೋನಗಳಲ್ಲಿ ಗಾಡಿ ಕೊಯ್ದಿರುತ್ತದೆ. (ಇ)ಯ ನಟ್ಟಿಗೆ ಕ್ಯಾಸಲ್ ನಟ್ ಎಂಬ ಹೆಸರುಂಟು. ಅದರ ಮೇಲ್ಭಾಗದಲ್ಲಿಯ ಸಿಲಿಂಡರಾಕೃತಿಯ ಚಾಚಿನಲ್ಲಿ ಈ ಗಾಡಿಗಳಿವೆ. (ಇ)ಯದ್ದು ವೈಲ್‍ನ ತಡೆನಟ್ಟು ಅಥವಾ ಸೀಳುನಟ್ಟು. ಸೆಟ್‍ಸ್ಕ್ರೂ ಒಂದರಿಂದ ನಟ್ಟಿನ ಮೇಲಿನ ಸೀಳುಭಾಗವನ್ನು ಕೊಂಚ ಅಮುಕಿದಂತೆ ಮಾಡುವುದರಿಂದ ಅಳ್ಳಕದ ತಡೆಯಾಗುತ್ತದೆ. ಸಣ್ಣಗಾತ್ರಗಳಲ್ಲಿ ಸೆಟ್ ಸ್ಕ್ರೂ ಉಪಯೋಗಿಸುವ ಬದಲು ಸೀಳಿನ ಮೇಲುಭಾಗಕ್ಕೆ ಒಂದು ಸರಿಯಾದ ಸುತ್ತಿಗೆ ಹೊಡೆತಕೊಟ್ಟು ಇದನ್ನು ಸಾಧಿಸಲಾಗುತ್ತದೆ.

ಪೆನ್ ನಟ್ ಅಥವಾ ಉಂಗುರದ ನಟ್ ಎಂದು ಕರೆಯುವ ಚಿತ್ರ (ಎಫ್)ನ ಮಾದರಿಯಲ್ಲಿ ನಟ್ಟಿನ ತಳಭಾಗದಲ್ಲಿ ಸಿಲಿಂಡರಾಕೃತಿಯ ಚಾಚು ಇದ್ದು ಅದರ ನಡುವೆ ಒಂದು ಸುತ್ತುಗಾಡಿಯನ್ನು ಮಾಡಲಾಗಿದ್ದು ಜೋಡಿಸುವ ಭಾಗದ ಒಂದು ಮಗ್ಗಲಿಂದ ಒಂದು ನಟ್ ಸ್ಕ್ರೂಮೊಳೆಯನ್ನು ಅದರ ತುದಿ ಈ ಗಾಡಿಯೊಳಕ್ಕೆ ಕೂರುವಂತೆ ತಿರುಗಿಸಿರುವುದರಿಂದ ಅಳ್ಳಕವಾಗದ ತಡೆಯನ್ನು ಉಂಟುಮಾಡಲಾಗಿರುತ್ತದೆ. ಇದೇ ಉದ್ದೇಶಕ್ಕೆ ಒಂದು ತಡೆಫಲಕವನ್ನು ಉಪಯೋಗಿಸುವ ರೀತಿಯನ್ನು ಚಿತ್ರ(3)ರಲ್ಲಿ ತೋರಿಸಿದೆ. ಒಂದೇ ಸಾಲಿನಲ್ಲಿರುವ ಹಲವಾರು ನಟ್ಟುಗಳಿಗೆ ಇಂಥ ಒಂದು ಫಲಕವನ್ನು ಉಪಯೋಗಿಸಬಹುದು. ಹಲವು ರೀತಿಯ ಸ್ಪ್ರಿಂಗ್ ವಾಶರುಗಳನ್ನು ಬಳಸುವುದರಿಂದಲೂ ಈ ಅಳ್ಳಕ ತಡೆಯನ್ನು ಉಂಟುಮಾಡಲು ಸಾಧ್ಯವಿದೆ.
(ಬಿ.ಆರ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ